ಪಿತೃವರ್ತಿ -
ಕೌಶಿಕ ಮುನಿಯ ಏಳು ಜನ ಮಕ್ಕಳಲ್ಲಿ ಕೊನೆಯವ. ಉಳಿದವರು ಸ್ವಸೃಪ, ಕ್ರೋಧನ, ಹಿಂಸ, ಪಿಶುನ, ಕವಿ, ವಾಗ್ದುಷ್ಟ. ಈ ಏಳು ಜನ ಅಣ್ಣ ತಮ್ಮಂದಿರೂ ಗರ್ಗನೆಂಬ ಮುನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹೀಗಿರುವಾಗ ಒಮ್ಮೆ ಕ್ಷಾಮ ಸಂಭವಿಸಿತು. ಆಗ ಹೊಟ್ಟೆಗೆ ಗತಿ ಇಲ್ಲದೆ ಗರ್ಗಮುನಿಯ ಹಸುವನ್ನೇ ಕೊಂದು ತಿಂದರು. ಶ್ರಾದ್ಧ ರೀತಿಯಲ್ಲಿ ಅಂದರೆ ಪಿತೃವರ್ತಿ ತನ್ನ ಒಡಹುಟ್ಟಿದವರಲ್ಲಿ ಇಬ್ಬರನ್ನು ವಿಶ್ವೇದೇವಸ್ಥಾನದಲ್ಲಿಯೂ ಮತ್ತೆ ಮೂವರನ್ನು ಪಿತೃ ಸ್ಥಾನದಲ್ಲಿಯೂ ಮತ್ತೊಬ್ಬನನ್ನು ಅತಿಥಿಯನ್ನಾಗಿಯೂ ನಿಯಮಿಸಿ ವಿದ್ಯುಕ್ತವಾಗಿ ಪಿತೃ ಪ್ರೀತಿಯಾಗುವ ರೀತಿಯಲ್ಲಿ ಆ ಹಸುವಿನ ಮಾಂಸವನ್ನು ತಿಂದರು. ಗರ್ಗಮುನಿಗೆ ಹುಲಿ ಹಸುವನ್ನು ತಿಂದುಬಿಟ್ಟಿತು ಎಂದು ಸುಳ್ಳು ಹೇಳಿದರು. ಹೀಗೆ ಸುಳ್ಳು ಹೇಳಿದ್ದರಿಂದ ಕಾಲಾನಂತರದಲ್ಲಿ ಇವರೆಲ್ಲರೂ ದಶಾರ್ಣ ದೇಶದಲ್ಲಿ ಬೇಡರಾಗಿ ಹುಟ್ಟಿದರು. ಹಸುವಿನ ಮಾಂಸವನ್ನು ಪಿತೃ ಪ್ರೀತಿಗಾಗಿ ಉಪಯೋಗಿಸಿದುದರಿಂದ ಇವರಿಗೆ ಪೂರ್ವ ಜನ್ಮದ ಸ್ಮರಣೆ ಇತ್ತು. ಅದರಿಂದಾಗಿ ಬೇಗ ಆ ಜನ್ಮವನ್ನು ಕಳೆದುಕೊಂಡು ಕಾಲಾಂಜನ ಪರ್ವತದಲ್ಲಿ ಜಿಂಕೆಗಳಾಗಿ ಜನಿಸಿದರು. ಮೂರನೆಯ ಸಲ ಶರದ್ವೀಪದಲ್ಲಿ ಚಕ್ರವಾಕ ಪಕ್ಷಿಗಳಾಗಿ ಜನಿಸಿದರು. ನಾಲ್ಕನೆಯ ಸಲ ಮಾನಸ ಸರೋವರದಲ್ಲಿ ಹಂಸಗಳಾಗಿ ಜನಿಸಿದರು. ಈ ಸಂದರ್ಭದಲ್ಲಿ ಪುರು ವಂಶದ ವಿಭ್ರಾಜನೆಂಬ ರಾಜ ತನ್ನ ಪರಿವಾರದೊಂದಿಗೆ ಆ ಮಾನಸ ಸರೋವರಕ್ಕೆ ಬಂದು ಕ್ರೀಡಿಸುತ್ತಿದ್ದ. ಅವನನ್ನು ನೋಡಿದ ಪಿತೃವರ್ತಿ ತಾನೂ ರಾಜನಾಗಲು ಇಚ್ಛೆ ಪಟ್ಟ. ಅವನ ಇಬ್ಬರು ಸಹೋದರರು ಮಂತ್ರಿ ಪದವಿಯನ್ನು ಬಯಸಿದರು. ಪಿತೃವರ್ತಿ ವಿಭ್ರಾಜರಾಜನ ಮಗ ಬ್ರಹ್ಮದತ್ತನಾಗಿ, ಮಂತ್ರಿಯಾಗಲು ಬಯಸಿದ ಸಹೋದರರು ಮಂತ್ರಿ ಪುತ್ರರಾಗಿ, ನಿಷ್ಕಾಮರಾಗಿದ್ದ ಮಿಕ್ಕ ನಾಲ್ವರು ಬ್ರಾಹ್ಮಣ ಶ್ರೇಷ್ಠರಾಗಿ ಅದೇ ರಾಜಧಾನಿಯಲ್ಲಿಯೇ ಜನಿಸಿದರು. ಬ್ರಹ್ಮದತ್ತ ರಾಜನಾಗಿ ಇನ್ನಿಬ್ಬರು ಮಂತ್ರಿಗಳಾಗಿ ಪ್ರಸಿದ್ಧಿಯಾದರು. ಇವರಿಂದ ಸಂಹರಿಸಲ್ಪಟ್ಟ ಹಸು ಸನ್ನತಿಯೆಂಬ ಹೆಸರಿನಿಂದ ದೇವಲ ಮುನಿಯ ಮಗಳಾಗಿ ಹುಟ್ಟಿ ಬ್ರಹ್ಮದತ್ತನನ್ನೇ ಮದುವೆಯಾದಳು. ಶ್ರೇಷ್ಠ ಬ್ರಾಹ್ಮಣರಾಗಿ ಜನಿಸಿದ್ದ ನಾಲ್ವರು ಸಹೋದರರು ತಪಸ್ಸಿಗಾಗಿ ಅರಣ್ಯಕ್ಕೆ ಹೊರಟರು. ಆಗ ಅವರ ತಂದೆ ತನಗೆ ಗತಿ ಯಾರೆಂದು ಗೋಳಾಡತೊಡಗಿದನು. ಆ ನಾಲ್ವರು ಒಂದು ಶ್ಲೋಕವನ್ನು ಬರೆದು ತಮ್ಮ ತಂದೆಗೆ ಕೊಟ್ಟು ಅಯ್ಯಾ, ಹೆದರಬೇಡ. ಈ ಶ್ಲೋಕವನ್ನು ತೆಗೆದುಕೊಂಡು ಹೋಗಿ ಈ ದೇಶದ ರಾಜನಿಗೆ ತೋರಿಸು. ಆತ ನಿನಗೆ ಯಥೇಚ್ಛವಾಗಿ ಧನವನ್ನು ಕೊಡುತ್ತಾನೆ ಎಂದು ಹೇಳಿ ತಪಸ್ಸಿಗೆ ಹೋದರು. ಬಳಿಕ ಆ ವೃದ್ಧನು ಮಾರನೇ ದಿವಸ ರಾಜನಲ್ಲಿಗೆ ಹೋಗಿ ಆ ಶ್ಲೋಕವನ್ನು ಓದಿದ. ಆ ಶ್ಲೋಕದಲ್ಲಿ ಆ ಸಪ್ತ ಸಹೋದರರ ಆರು ಜನ್ಮಗಳ ನೆನಪೂ ಇತ್ತು. ಅದನ್ನು ಕೇಳಿದ ಬ್ರಹ್ಮದತ್ತನಿಗೆ ತಮ್ಮ ಪೂರ್ವಭವಾವಳಿಗಳೆಲ್ಲ ನೆನಪಿಗೆ ಬಂದು ಆತ ಮೂರ್ಛೆ ಬಂದು ಬಿದ್ದುಬಿಟ್ಟ. ಮರಳಿ ಚೇತರಿಸಿಕೊಂಡು ಆ ಬ್ರಾಹ್ಮಣನಿಗೆ ಬೇಕಾದಷ್ಟು ಗ್ರಾಮಗಳನ್ನೂ ವಿಪುಲ ಧನವನ್ನೂ ಕೊಟ್ಟು ಕಳುಹಿಸಿ ತನ್ನ ಮಗನಾದ ವಿಶ್ವತ್ಸೇನನೆಂಬುವನಿಗೆ ರಾಜ್ಯದ ಪಟ್ಟ ಕಟ್ಟಿ, ಸನ್ಮತಿಯನ್ನು ಮಂತ್ರಿಪುತ್ರರನ್ನು ಜೊತೆಯಲ್ಲಿ ಕರೆದುಕೊಂಡು ಉಳಿದ ತನ್ನ ನಾಲ್ವರು ಅಣ್ಣಂದಿರು ತಪಸ್ಸು ಮಾಡುತ್ತಿದ್ದ ತಾಣಕ್ಕೆ ಹೋದ. ಬಳಿಕ ಕೆಲಕಾಲದವರೆಗೆ ಇವರೆಲ್ಲರೂ ಯೋಗ ಪರಾಯಣರಾಗಿದ್ದು ಕಡೆಗೆ ದೇಹತ್ಯಾಗ ಮಾಡಿ ಶಾಶ್ವತ ಸುಖವನ್ನು ಪಡೆದರು.					  (ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ